Posted by: pavankir | ಏಪ್ರಿಲ್ 11, 2009

ಕಾಯುವಿಕೆಗಿಂತ ಅಧಿಕ ತಪವು ಬೇರಿಲ್ಲ..!

ಕಾಯುವಿಕೆಗಿಂತ ಅಧಿಕ ತಪವು ಬೇರಿಲ್ಲ, ಹೀಗೆ ಹೇಳಿದವರು ಪ್ರಾಜ್ಞರು. ನಮಗೆ ಗೊತ್ತಿಲ್ಲ ಬಿಡಿ! ನಾವು ಕಾದವರಲ್ಲ..ಎಂದು ಹೇಳಲು ಅಸಾದ್ಯ. ನಾವೆಲ್ಲ ಒಬ್ಬರಿಗಲ್ಲಾ ಒಬ್ಬರಿಗೆ ಕಾಯುತ್ತಿರುತ್ತೇವೆ. ಎಳೆ ಮಗು ಹಾಲುಣಿಸುವ ಅಮ್ಮನಿಗೆ, ಅಂಗಣಕ್ಕಿಳಿಯುವ ಮಗು ಆಡಲು ಬರುವ ಗೆಳೆಯರಿಗೆ, ಶಾಲೆಯಲ್ಲಿ ಗುರುಗಳಿಗೆ, ಯೌವನದಲ್ಲಿ ಸಖಿ ಸಖರಿಗೆ, ಮುತ್ತೈದೆ ಮಗುವಿಗೆ, ಗಂಡ ಹೆಂಡತಿಗೆ, ದರಿದ್ರ ಧನಕ್ಕೆ, ದುರ್ಬಲ ಬಲಕ್ಕೆ, ವೃದ್ದ ಸಾವಿಗೆ, ಬರಡಾದ ನೆಲ ಮಳೆಗೆ, ಕೋಗಿಲೆಯು ವಸಂತಕ್ಕೆ….ಹೀಗೆ ಎಲ್ಲರೂ ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಕಾಯುವುದೆ. ಬದುಕೇ ಹಾಗೆ..ಕವಿವರ ಅಡಿಗರೆಂದಂತೆ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ನಮ್ಮ ಜೀವನವಿರಬೇಕು. ನಮ್ಮೆಲ್ಲರಿಗೂ ಒಂದೊಂದು ನಿರೀಕ್ಷೆಗಳು, ಅಲ್ಲಾ ಕೆಲವೊಮ್ಮೆ ಪ್ರತೀಕ್ಷೆಗಳು, ಒಟ್ಟಾರೆ ಕಾತರ ಅದುವೇ ಕಾಯುವಿಕೆ.

ಈಗ ಬಂದಾರೆಂಬ ಕಾತರ...

ಈಗ ಬಂದಾರೆಂಬ ಕಾತರ...

ಈ ಕಾಯುವಿಕೆಯಲ್ಲಿರುವ ಸುಖ, ಅನುಭೂತಿ, ಆತ್ಮ ಸಂತೋಷ ಆ ಕಾತರ ನಿಜವಾದಾಗ ನಿಮಗೆ ದೊರೆಯದು. ಒಂದು ಹನಿ ನೀರಿಗಾಗಿ ಕಾಯುವ ನಮಗೆ ಆ ಹನಿ ನೀರಿನಿಂದ ಸಿಗುವ ಸುಖದ ಕಲ್ಪನೆ, ಅದನ್ನು ಅನುಭವಿಸುವ ಕಾತರ, ಹನಿ ನೀರನ್ನು ಸಂಪತ್ತೆಂದು ತಿಳಿಯುವ ಮನದ ಅನುಭೂತಿ, ಅದರೊಟ್ಟಿಗೆ ಮೊಳೆಯುವ ಹೊಸ ಹೊಸ ನಿರೀಕ್ಷೆಗಳು ಆ ಹನಿ ನೀರು ದೊರೆತಾಗ ನಮಗೆ ಸಿಗುವುದಿಲ್ಲ. ಬಹಳ ವರ್ಷಗಳ ಕಾಯುವಿಕೆಯ ಬಳಿಕ ಸಿಕ್ಕಿದ ಗೆಳತಿಯಲ್ಲಿ ಮನದ ಒಂದು ಮಾತನ್ನೂ ಆಡಲಾಗುವುದಿಲ್ಲ. ಈ ಕಾಯುವಿಕೆಯೇ ಹಾಗೆ, ಇಲ್ಲದೇ ಇರುವುದನ್ನು ನೆನೆ ನೆನೆದು ಹಂಬಲಿಸಿ ಖುಷಿ ಪಡಿಸುತ್ತದೆ. ಹಾಗಾದರೆ ಈ ಕಾಯುವಿಕೆಯಲ್ಲಿ ನೋವೇ ಇಲ್ಲವೇ?

 

ಕಾಲವನು ಕಾದಿರೆಂದು

 ಕಾಯದೇ ಹೋದ ನಲ್ಲಾ

ಕಾಲದೊಡನೆ ಕಾದು

ಕಾದಲನ ಕಾದಿರುವೆನಲ್ಲಾ..

ಹದಿನಾಲ್ಕು ವರ್ಷ ಕಾದಲನಾದ ಲಕ್ಷ್ಮಣನಿಗೆ ಕಾಯುತ್ತಿದ ಊರ್ಮಿಳೆ ದುಃಖಿಸುತ್ತಿದ್ದಳಂತೆ. ರಾಮನಿಗಾಗಿ ಕಾಯುತ್ತಿದ ಶಬರಿಗೂ ನೋವಿನ ಅನುಭವವಾಗಿತ್ತಂತೆ. ದುಷ್ಯಂತನಿಗಾಗಿ ಕಾದ ಶಾಕುಂತಲೆಯ ಪ್ರೇಮ, ರಾಮನಿಗಾಗಿ ಕಾದ ಸೀತೆಯ ತ್ಯಾಗ, ಬಿಚ್ಚಿದ ಮುಡಿ ಕಟ್ಟುವರೆ ಕಾದ ದ್ರೌಪದಿಯ ಸಹನೆ, ಬೀಷ್ಮನಿಗಾಗಿ ಕಾದ ಅಂಬೆಯ ಹತಾಶೆ, ಇವೆಲ್ಲಾ ಕಾಯುವಿಕೆಯ ಮುಖಗಳು. ಅಷ್ಟೆಲ್ಲಾ ಹಿಂದಿನ ಕತೆಯೇಕೆ, ನನಗಾಗಿ ಕಾಯುವ ನನ್ನಮ್ಮ, ನನ್ನ ಬರವನ್ನೇ ಇದಿರು ನೋಡುವ ನನ್ನಕ್ಕ, ನನ್ನ ಫೋನಿಗಾಗಿ ಕಾಯುವ ನನ್ನಪ್ಪ, ನಾ ತರುವ ತಿಂಡಿಯ ನಿರೀಕ್ಷೆಯಲ್ಲಿರುವ ನಮ್ಮನೆಯ ನಾಯಿ ..ಎಲ್ಲಾ ಕಾಯುವಿಕೆಯ ಮಜಲುಗಳು. ಹಾಗಾದರೆ ಈ ಕಾಯುವಿಕೆ ಕೆಲವರಿಗೆ ನಲಿವನ್ನು ಮತ್ತೆ ಕೆಲವರಿಗೆ ನೋವನ್ನು ನೀಡುತ್ತದೆ ಎಂದಾಯಿತು.

ಗೆಳೆಯರೆ, ಬಾಳು ಎಂಬ ಶಬ್ದಕ್ಕೆ ಒಂದು ಜಾತಿಯ ಅಲಗು, ಕತ್ತಿ ಎಂಬ ಅರ್ಥವಿದೆ. ಅಂದರೆ ಮನುಷ್ಯನ ಬಾಳು ಎಂದರೆ ಅಲಗಿನ ಬಾಯಿಗೆ ಹಚ್ಚಿದ ಜೇನನ್ನು ನೆಕ್ಕುವುದು. ಸ್ವಲ್ಪ ಜಾಗೃತೆ ತಪ್ಪಿದರೂ ನಾಲಗೆ ಚೂರಾದೀತು. ಆದರೂ ನಾವೆಲ್ಲರೂ ಅಲಗಿಗೆ ಬೀಳುವ ಜೇನಿಗಾಗಿ ಕಾಯುತ್ತಿದ್ದೇವೆ. ಕಾಯುವಿಕೆಯಲ್ಲಿ ಸುಖವಿದೆ, ಕಾಯುವಿಕೆಯೊಂದು ತಪವೆಂದು ಸುಮ್ಮನೇ ಕುಳಿತರೆ ಕಾಲ ಯಾರನ್ನೂ ಕಾಯದೆ ಮುಂದೆ ಸಾಗಿ ಬಿಡುತ್ತದೆ. ಕಾಯುವಿಕೆಯ ಸುಖವನ್ನು ಅನುಭವಿಸುತ್ತಾ, ಕಾಯುತ್ತಿರುವುದನ್ನು ಪಡೆಯುವುದಕ್ಕೆ ಬೇಕಾದ ಪ್ರಯತ್ನವನ್ನು ಮಾಡೋಣ. ನಮಗಾಗಿ ಕಾಯುವವರಿಗಾಗಿ ನಾವು ಕಾಯೋಣ. ನಮ್ಮ ಕಾರ್ಯದ ಒತ್ತಡದ ನಡುವೆಯೂ ನಮ್ಮನ್ನು ಕಾಯುತ್ತಿರುವವರ ನಿರೀಕ್ಷೆಗಳನ್ನು ಹುಸಿಯಾಗಗೊಡದೆ ಈಡೇರಿಸುವ ಪ್ರಯತ್ನ ಮಾಡೋಣ. ಇದನ್ನು ಕೇಳಿ ಕಾಯುವುದನ್ನೇ ಬಿಟ್ಟು ಬಿಡುವ ಪ್ರಯತ್ನ ಬೇಡ, ಏಕೆಂದರೆ ಮನುಷ್ಯ ಬೆಳಕಿಲ್ಲದ ದಾರಿಯಲ್ಲಿ ನೆಡೆಯಬಲ್ಲ…ಆದರೆ ಕನಸಿಲ್ಲದ ದಾರಿಯಲ್ಲಿ ಒಂದು ಹೆಜ್ಜೆಯನ್ನೂ ಇಡಲಾರ…

ಹೀಗೆ ಒಂದಿಷ್ಟು ಹರಟೆ ಮುಗಿಸುತ್ತಾ ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುತ್ತೇನೆ….

Advertisements

Responses

  1. HI Pavan, nimminda innashtu inthaha kruthimuthugalu barali mattu namage adannu voduva avakasha sigali yendu haaraisuva nimmava.

  2. Danyavaadagalu Subraya Joisaravare..

    mundeyu nimma nireekshegalannu pooraisuvatta prayatnisuttene…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

ವಿಭಾಗಗಳು

%d bloggers like this: